ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ. UN ಜನರಲ್ ಅಸೆಂಬ್ಲಿ ಇದನ್ನು 24 ಗಂಟೆಗಳ ಅಹಿಂಸೆ ಮತ್ತು ಕದನ ವಿರಾಮವನ್ನು ಆಚರಿಸುವ ಮೂಲಕ ಶಾಂತಿಯ ಆದರ್ಶಗಳನ್ನು ಬಲಪಡಿಸಲು ಮೀಸಲಾಗಿರುವ ದಿನವೆಂದು ಘೋಷಿಸಿದೆ.
ಅಂತಾರಾಷ್ಟ್ರೀಯ ಶಾಂತಿ ದಿನದ 2024 ರ ಥೀಮ್ ” ಶಾಂತಿಯ ಸಂಸ್ಕೃತಿಯನ್ನು ಬೆಳೆಸುವುದು”.
1981ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ.
ಎರಡು ದಶಕಗಳ ಬಳಿಕ 2001ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇದನ್ನು ಅಹಿಂಸೆಯ ಕಾಲವೆಂದು ಘೋಷಿಸಲು ನಿರ್ಧರಿಸಿತು. ಅಂದಿನಿಂದ ಗಡಿಯ ಎರಡೂ ಬದಿಗಳಲ್ಲಿರುವ ರಾಷ್ಟ್ರಗಳು ಅಹಿಂಸೆ ಮತ್ತು ಕದನ ವಿರಾಮದ ಅಭ್ಯಾಸಗಳನ್ನು ಮಾಡುವುದನ್ನು ಒಂದು ಆಚರಣೆಯಾಗಿ ಪ್ರಾರಂಭಿಸಿದವು.
ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ 21ರಂದು ಬೆಳಗ್ಗೆ 9ಗಂಟೆಗೆ ಶಾಂತಿ ಉದ್ಯಾನದಲ್ಲಿ ಸಾಮಾನ್ಯಸಭೆಯ ಪ್ರಧಾನ ಕಾರ್ಯದರ್ಶಿ ಸಾಂಪ್ರದಾಯಿಕ ಶಾಂತಿ ಬೆಲ್ (‘ಪೀಸ್ ಬೆಲ್’) ಬಾರಿಸುವುದರೊಂದಿಗೆ ಸಮಾರಂಭ ಪ್ರಾರಂಭವಾಗುತ್ತದೆ. ನಂತರ 9.30ಕ್ಕೆ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಆವರಣದಲ್ಲಿ ಈ ಆಚರಣೆ ನಡೆಯುತ್ತದೆ.
ಶಾಂತಿಯ ಸಂಕೇತದ ಈ ಘಂಟೆಯನ್ನು ಯುನೈಟೆಡ್ ನೇಷನ್ಸ್ ಅಸೋಸಿಯೇಷನ್ ಆಫ್ ಜಪಾನ್ ಜೂನ್ 1954ರಲ್ಲಿ ದಾನ ಮಾಡಿತು.
ಬುದ್ಧನ ಜನ್ಮಸ್ಥಳವನ್ನು ಸಂಕೇತಿಸುವ ಹನಮಿಡೊ (ಹೂವುಗಳಿಂದ ಅಲಂಕರಿಸಲ್ಪಟ್ಟ ಸಣ್ಣ ದೇವಾಲಯ) ಮಾದರಿಯಲ್ಲಿ ಘಂಟೆ ಗೋಪುರವನ್ನು ನಿರ್ಮಿಸಲಾಗಿರುತ್ತದೆ