ಸಿನಿಮಾ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡಿದ, ಡಿಸ್ಕೋ ಡ್ಯಾನ್ಸರ್ ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದ ಬೆಂಗಾಲಿ ಲೆಜೆಂಡರಿ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಅಕ್ಟೋಬರ್ 8ರಂದು ನಡೆಯುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 2022 ರ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಶಸ್ತಿಯನ್ನು ಮಿಥುನ್ ಚಕ್ರವರ್ತಿ ಅವರಿಗೆ ನೀಡಲಾಗುತ್ತದೆ.
74 ವರ್ಷದ ಚಕ್ರವರ್ತಿ ಅವರು ಅವರ 1976ರ ಚಲನಚಿತ್ರ ‘ಮೃಗಯಾ’ ಸಿನಿಮಾದ ಮೂಲಕ ನಟನೆ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಈ ಸಿನಿಮಾಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯೂ ಲಭಿಸಿದೆ.
ಅವರು ‘ಕಸಂ ಪೈದಾ ಕರ್ನೆ ವಾಲೆ ಕಿ’ ಮತ್ತು ‘ಕಮಾಂಡೋ’ ಸಿನಿಮಾದಲ್ಲಿಯೂ ತಮ್ಮ ನಟನೆಯ ಮೂಲಕ ಹೆಸರು ಪಡೆದಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಸಿನಿಮಾ ಕ್ಷೇತ್ರದಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ.
1969 ರಲ್ಲಿ ದೇವಿಕಾ ರಾಣಿ ರೋರಿಚ್ ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸುವವರನ್ನು “ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವರ ಶ್ರೇಷ್ಠ ಮತ್ತು ಅತ್ಯುತ್ತಮ ಕೊಡುಗೆಗಾಗಿ” ಗೌರವಿಸಲಾಗಿದೆ. ಮತ್ತು ಭಾರತೀಯ ಚಲನಚಿತ್ರೋದ್ಯಮದ ಗಣ್ಯ ವ್ಯಕ್ತಿಗಳನ್ನು ಒಳಗೊಂಡಿರುವ ಸಮಿತಿಯಿಂದ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಸ್ವರ್ಣ ಕಮಲ (ಗೋಲ್ಡನ್ ಲೋಟಸ್) ಪದಕ , ಶಾಲು ಮತ್ತು 10 ಲಕ್ಷ (US$12,000) ನಗದು ಬಹುಮಾನವನ್ನು ಒಳಗೊಂಡಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು, ತೀರ್ಪುಗಾರರ ಅಧ್ಯಕ್ಷರು, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಪ್ರತಿನಿಧಿಗಳು ಮತ್ತು ಅಖಿಲ ಭಾರತ ಸಿನಿ ಉದ್ಯೋಗಿಗಳ ಒಕ್ಕೂಟದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ.