ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಒಟ್ಟು 5,267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಸೇರಿದಂತೆ ಒಟ್ಟಾರೆ 5,267 ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಒಂದರಿಂದ ಐದನೇ ತರಗತಿಗೆ (ಪ್ರಾಥಮಿಕ ಶಾಲಾ ಶಿಕ್ಷಕರು) 4,424 ಶಿಕ್ಷಕರು, ಆರರಿಂದ ಎಂಟನೇ ತರಗತಿಗೆ (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು) 78 ಹಾಗೂ 380 ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-2) ಸೇರಿದಂತೆ ಒಟ್ಟು 5,267 ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳಲ್ಲಿ ಸದ್ಯ 6,584 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಶೇ.80ರಷ್ಟನ್ನು ಭರ್ತಿ ಮಾಡಲಾಗುತ್ತಿದೆ. 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಸರಕಾರ ಈ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲಿಯೇ ಈ ಹುದ್ದೆಗಳ ಭರ್ತಿಗೆ ಸರಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ.